Saturday, April 4, 2009

ಮುಂಜಾನೆಯ ಮಂಜು

ಕಾಲೇಜಿನ ಆ ದಿನಗಳನ್ನ ಮರೆಯಲು ಖಂಡಿತಾ ಸಾಧ್ಯವಿಲ್ಲ. ಎನ್ ಎಸ್ ಎಸ್ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದವರಿಗಂತೂ ಇದು ಗೋಲ್ಡನ್ ಮೊಮೆಂಟ್ಸ್. ಜೊತೆಗೆ ಪಿಕ್ ನಿಕ್ ಮಜಾ ಬೇರೆ. ಅದೊಂದು ದಿನ ನನ್ನ ಕಾಲೇಜು ಲೈಫ್ ಮುಗಿದೇ ಬಿಡ್ತು. ಜವಾಬ್ದಾರಿಯೊಂದು ಹೆಗಲ ಮೇಲೆ ಬಿತ್ತು. ಅದೇ ವೇಳೆಗೆ ಊರಿಗೆ ಬಂದ ನನ್ನ ಅಂಕಲ್ ಬೆಂಗಳೂರಿಗೆ ಬಂದರೆ ನಮ್ಮ ಮನೆಗೆ ಬಾ. ನಮ್ಮ ಮನೆಯಲ್ಲೇ ಇರು ಎಂದು ಹೇಳಿದ್ರು. ಆಗ ನನಗೆ ಆದ ಖುಷಿ ಅಷ್ಟಿಷ್ಟಲ್ಲ. ಯಾಕಂದ್ರೆ ಪಿಜಿ, ಹಾಸ್ಟೇಲ್ ಅಂದ್ರೆ ನನಗೆ ಅಲರ್ಜಿ. ಅದೊಂದು ದಿನ ರಾತ್ರಿ ಹೆತ್ತು ಹೊತ್ತು ಅಷ್ಟು ದಿನ ಸಾಕಿದ ನನ್ನ ಅಪ್ಪ ಅಮ್ಮನ ಬಿಟ್ಟು ಸುಂದರ ಉದ್ಯಾನನಗರಿಗೆ ಹಲವು ಕನಸುಗಳನ್ನ ಹೊತ್ತು ಹೊರಟು ಬಂದೆ. ಮಂಗಳೂರು ಬಸ್ ನಿಲ್ದಾಣದಿಂದ ಅಂಕಲ್ ಗೆ ಪೋನ್ ಮಾಡಿದೆ. ಆಗ ನಂಗೆ ಶಾಕ್ ಟ್ರೀಟ್ ಮೆಂಟ್ ವೊಂದು ಕಾದಿತ್ತು.
ಪೋನ್ ರಿಸೀವ್ ಮಾಡಿದ ಅಂಕಲ್ ಮನೆಗೆ ಬರುವುದು ಹೌದಮ್ಮ , ಬೆಂಗಳೂರು ಕ್ರೈಂ ಸಿಟಿ. ಹುಡ್ಗೀರಿಗಂತೂ ಈ ಸಿಟಿ ತುಂಬಾ ಡೇಂಜರ್. ಹೀಗಾಗಿ ನಂಗೆ ನೀನು ನಮ್ಮ ಮನೇಲಿ ಇರೋದು ತುಂಬಾ ಭಯ ಅಂದು ಬಿಟ್ರು. ತಕ್ಷಣ ಪೋನಿಟ್ಟು ಬಸ್ ನಿಲ್ದಾಣದ ಒಂದು ಮೂಲೆಯಲ್ಲಿ ಕೂತು ಬಿಕ್ಕಿ ಬಿಕ್ಕಿ ಅತ್ತು ಬಿಟ್ಟೆ.
ಹೌದು ಕೆಲವೊಮ್ಮೆ ಸಂದರ್ಭಗಳು ಮನುಷ್ಯನನ್ನ ತುಂಬಾ ಧೈರ್ಯವಂತರನ್ನಾಗಿಸಿ ಬಿಡುತ್ತೆ.
ಸಂಬಂಧಿಕರ ಸಹವಾಸ ಸಾಕಪ್ಪ ಅಂತ ಮನಸ್ಸಲ್ಲೇ ಗೊಣಗಿಕೊಂಡು ಏನಾದ್ರೂ ಆಗ್ಲಿ ಬೆಂಗಳೂರಿಗೆ ಹೋಗ್ಲೇ ಬೇಕು ಅನ್ಕೊಂಡೆ.
ಕಾಲೇಜು ದಿನಗಳಲ್ಲಿ ನನಗೆ ಬೆಂಗಳೂರಿನ ವೀಣಾ, ಡೊಮಿನಿಕ್ ದಂಪತಿ ಪರಿಚಯವಾಗಿದ್ರು. ಕೂಡ್ಲೇ ಅವರಿಗೆ ಪೋನ್ ಮಾಡಿ ವಿಷಯ ತಿಳಿಸಿದೆ. 2 ದಿನ ನಾನು ನಿಮ್ಮ ಮನೇಲಿ ಇರಬಹುದಾ ಅಂತ ಕೇಳಿದೆ. 2 ದಿನ ಯಾಕೆ ನಿಂಗೇ ಇಷ್ಟ ಇರೋವರೆಗೂ ನಮ್ಮ ಮನೇಲಿ ಇರು ಅಂತ ಹೇಳಿದ್ರು. ಹೀಗೆ ಬೆಂಗಳೂರಿಗೆ ಬಂದ ನಾನು 5 ದಿನಗಳ ಕಾಲ ಅವರ ಮನೆಯಲ್ಲಿದ್ದೆ, ಸರಿಯಾದ ಹಾಸ್ಚೇಲ್ ಸಿಕ್ಕಿದ ಮೇಲೆಯೇ ಡೊಮಿನಿಕ್ ದಂಪತಿ ನನ್ನನ್ನ ಕಳುಹಿಸಿದ್ರು.
ಇದಾದ 2 ತಿಂಗಳಲ್ಲಿ ನಾನು ಉದ್ಯೋಗಕ್ಕಾಗಿ ಹೈದಾರಾಬಾದಿಗೆ ಹಾರಿದೆ. ಅಲ್ಲಿ ಮೂರುವರೆ ವರ್ಷ ಕೆಲ್ಸ ಮಾಡಿ ಮತ್ತೆ ಬೆಂಗಳೂರಿಗೆ ಹಿಂತಿರುಗಿದೆ. ಬೆಂಗಳೂರಿಗೆ ಬಂದು ಎರಡು ವರ್ಷಗಳೇ ಕಳೆದು ಹೋಯಿತು. ಆದ್ರೆ ಅಂದು ಮುಂಜಾನೆಯ ಮಂಜಿನಲ್ಲಿ ನನ್ನನ್ನ ಸ್ವಾಗತಿಸಿದ, ನನಗಾಗಿ ಬಸ್ ಸ್ಟ್ಯಾಂಡಿನಲ್ಲಿ ಕಾಯುತ್ತಾ ಕುಳಿತ ವೀಣಾನನ್ನು ನಾನು ಇದುವರೆಗೆ ಭೇಟಿಯೇ ಆಗಿಲ್ಲ. ಆ ಸುಂದರ ದಿನ ನನಗೆ ಇನ್ನೂ ಬಂದಿಲ್ಲ.